ಪಂಚಮ ದಳ -
	ಶತ್ರು ಪಕ್ಷಕ್ಕೆ ಬೆಂಬಲ ನೀಡಿ, ಶತ್ರುಗಳಿಗೆ ಅತ್ಯಂತ ಅನುಕೂಲವಾದ ಕಾಲದಲ್ಲಿ ಸ್ವದೇಶದಲ್ಲಿ ದಂಗೆಯೇಳುವ ದೇಶದ್ರೋಹಿಗಳ ರಹಸ್ಯ ತಂಡ (ಫಿಫ್ತ್-ಕಾಲಮ್). ಈ ಶಬ್ದದ ಉಗಮವಾದ್ದು ಸ್ಪೇನ್ ದೇಶದ ಅಂತರ್ಯುದ್ಧದ ಕಾಲದಲ್ಲಿ (1936-39). ಈ ಯುದ್ಧ ಜನರಲ್ ಫ್ರಾಂಕೋನ ನ್ಯಾಷನಲಿಸ್ಟ್ ಪಕ್ಷ ಮತ್ತು ದೇಶಾಭಿಮಾನಿಗಳ ರಿಪಬ್ಲಿಕನ್ ಪಕ್ಷ ಇವುಗಳ ನಡುವೆ ನಡೆಯಿತು. ರಿಪಬ್ಲಿಕನ್ ಪಕ್ಷದ ವಶದಲ್ಲಿದ್ದ ಪಟ್ಟಣಗಳ ಜನರಲ್ಲಿ ಕೆಲವರು ಫ್ರಾಂಕೋನ ಬೆಂಬಲಿಗರಾಗಿ ನಿಂತು ಜನರಲ್ಲಿ ರಿಪಬ್ಲಿಕನ್ ಸರ್ಕಾರದ ಬಗ್ಗೆ ವಿಶ್ವಾಸವನ್ನು ಕೆಡಿಸಲು ಸುಳ್ಳು ವರದಿಗಳನ್ನು ಹರಡಿದರು; ವಿಧ್ವಂಸಕ ಕಾರ್ಯಗಳಲ್ಲಿ ತೊಡಗಿ ದೇಶದ್ರೋಹಿಗಳಾಗಿ ವರ್ತಿಸಿದರು. ಮೆಡ್ರಿಡ್ ನಗರವನ್ನು ವಶಪಡಿಸಿಕೊಳ್ಳಲು ಹೊರಟ ನ್ಯಾಷನಲಿಸ್ಟ್ ಪಕ್ಷದ ಜನರಲ್ ಮೋಲಾನನ್ನು ಪತ್ರಿಕೆಯ ಸುದ್ದಿಗಾರರು ವಿಚಾರಿಸಿದಾಗ ತನ್ನ ನಾಲ್ಕು ದಳಗಳು ಪಟ್ಟಣಕ್ಕೆ ಮುತ್ತಿಗೆ ಹಾಕಿ ಕದನ ನಡೆಸುತ್ತಿವೆಯೆಂದು ಅವನು ತಿಳಿಸಿದ. ನಗರವನ್ನು ಯಾವ ದಳ ವಶಪಡಿಸಿಕೊಳ್ಳಬಹುದು ಎಂಬ ಸುದ್ದಿಗಾರರ ಪ್ರಶ್ನೆಗೆ ಅವನು ಪಂಚಮ ದಳ ಎಂದು ಉತ್ತರ ನೀಡಿದ. ಮೆಡ್ರಿಡ್ ನಗರವನ್ನು ನ್ಯಾಷನಲಿಸ್ಟ್ ಪಕ್ಷಕ್ಕೆ ಒಪ್ಪಿಸಲು ಸಿದ್ಧರಾಗಿದ್ದವರೇ ಪಂಚಮ ದಳ ಎಂಬುದು ಅವನ ಹೇಳಿಕೆಯ ಅರ್ಥವಾಗಿತ್ತು.

	ಪಂಚಮ ದಳ ಸಭ್ಯಪ್ರಜೆಗಳಂತೆ ವರ್ತಿಸುವ ದೇಶದ್ರೋಹಿಗಳ ಗುಂಪು. ಈ ಗುಂಪು ರಾಷ್ಟ್ರೀಯ ಏಕತೆಯನ್ನು ವಿಧ್ವಂಸಕ ಕ್ರಿಯೆಗಳಿಂದ ನಾಶಮಾಡಲು ಕ್ರಮ ಕೈಗೊಳ್ಳುತ್ತದೆ. ಶತ್ರುಗಳ ಪರವಾಗಿ ಸೇತುವೆ, ರೈಲುಮಾರ್ಗ, ಜಲಾಶಯ, ವಿದ್ಯುದುತ್ಪಾದನ ಕೇಂದ್ರ, ಪ್ರಮುಖ ಕಾರ್ಖಾನೆಗಳು ಮೊದಲಾದವನ್ನು ನಾಶ ಮಾಡುವುದು. ಜನರಲ್ಲಿ ಭೀತಿ ಹುಟ್ಟಿಸುವುದು, ಜನರು ದಂಗೆ ಏಳುವಂತೆ ಮಾಡುವುದು-ಇವು ಈ ದಳದ ಸದಸ್ಯರ ಕಾರ್ಯಾಚರಣೆಗಳು, ಯುದ್ಧಕಾಲದಲ್ಲಿ ಪಂಚಮದಳ ಇಡೀ ರಾಷ್ಟ್ರದ ಚಟುವಟಿಕೆಗಳನ್ನು ತಡೆಯಲು ಪ್ರಯತ್ನಿಸುತ್ತದೆ. ಗೂಢಚರ್ಯೆಯೂ ಪಂಚಮ ದಳದ ಪ್ರಧಾನ ಕಾರ್ಯಗಳಲ್ಲೊಂದು.

	ಪೋಲೆಂಡ್, ನಾರ್ವೆ, ಬೆಲ್ಜಿಯಮ್, ನೆದರ್‍ಲೆಂಡ್ಸ್ ಹಾಗೂ ಫ್ರಾನ್ಸ್ ದೇಶಗಳ ಆಕ್ರಮಣದ ಕಾಲದಲ್ಲಿ(1939-40) ಜರ್ಮನರು ಪಂಚಮದಳದ ಚಟುವಟಿಕೆಗಳನ್ನು ಆ ದೇಶಗಳಲ್ಲಿ ಹಬ್ಬಿಸಿದರು. ಹಿಟ್ಲರನಿಗೆ ರಹಸ್ಯವಾಗಿ ಬೆಂಬಲ ನೀಡಿದ ದೇಶದ್ರೋಹಿಗಳನ್ನು ಗುರುತಿಸಲು ಪಂಚಮದಳ ಎಂಬ ಶಬ್ದ ಆಗ ಹೆಚ್ಚಾಗಿ ಬಳಕೆಗೆ ಬಂತು. ಷಿಕಾಗೋ ನ್ಯೂಸ್ ಪತ್ರಿಕೆಯ ಬಾತ್ಮಿದಾರ ಲೀಲೆಂಡ್ ಸ್ಟೋ ಎಂಬಾತ ನಾರ್ವೆ ಪತನಗೊಂಡಾಗ ಅದು ಕ್ವಿಸ್ಲಿಂಗ್ ಹಾಗೂ ಇತರ ಪಂಚಮ ದಳ ದ್ರೋಹಿಗಳಿಂದಾಗಿ ಹಿಟ್ಲರನಿಗೆ ಶರಣಾಗತವಾಯಿತೆಂದು ವರದಿಮಾಡಿದ. ಅಮೆರಿಕದ ಅಧ್ಯಕ್ಷರೂಸ್ ವೆಲ್ಟರು ಎರಡನೆಯ ಮಹಾಯುದ್ಧದ ಕಾಲದಲ್ಲಿ ಸುಳ್ಳು ಸುದ್ದಿ ಹರಡಿದವರನ್ನು ಹಾಗೂ ನಿರಾಶಾವಾದಿಗಳನ್ನು ಆರನೆಯ ದಳ (ಸಿಕ್ಸ್ತ್ ಕಾಲಮ್) ಎಂದು ಕರೆದರು. ಸ್ಪೇನಿನ ರಿಪಬ್ಲಿಕನ್ ಪಕ್ಷದ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದ ವಿದೇಶಿಯರು ಮೆಡ್ರಿಡ್ ನಗರದಲ್ಲಿ ತಂಗುತ್ತಿದ್ದ ಫ್ಲಾರಿಡಾ ಹೋಟೆಲಿನಲ್ಲಿ ಅರ್ನೆಸ್ಟ್ ಹೆಮಿಂಗ್ವೇಯ ದಿ ಫಿಫ್ತ್ ಕಾಲಮ್ ಎಂಬ ನಾಟಕದ ಪ್ರದರ್ಶನವಾಯಿತು (1938). 				     (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ